ಯೋಗ ಮತ್ತು ಧ್ಯಾನ
ಯೋಗ ಎಂಬ ಪದವನ್ನು ಭಾರತದ ಪ್ರಾಚೀನ ಪುರಾಣಶಾಸ್ತ್ರಗಳಲ್ಲಿ ವಿಭಿನ್ನಾರ್ಥಗಳಲ್ಲಿ ಉಪಯೋಗಿಸಿದ್ದಾರೆ. ‘ಯೋಗ’ ಅಂದರೆ ಜೋಡಿಸುವಿಕೆ. ದೇಹ-ಆತ್ಮಗಳ ಭದ್ರವಾದ ಒಂದುಗೂಡು ವಿಕೆಯೇ ಯೋಗ ಎಂದರ್ಥವಾಗುತ್ತದೆ. ಈ ಗುರಿ ಸಾಧಿಸಲು ಹಲವಾರು ವಿಧಾನಗಳನ್ನು ಹೇಳಲಾಗಿದೆ. ಅವುಗಳಲ್ಲಿ, ಪತಂಜಲಿ ಮಹರ್ಷಿಯಿಂದ ಹೇಳಲ್ಪಟ್ಟ ಎಂಟು ವಿಧಾನಗಳುಳ್ಳ ಯೋಗ ಅಥವಾ ಅಷ್ಟಾಂಗ ಯೋಗ ವಿಧಾನ ಅತ್ಯಂತ ಅರ್ಥಯುಕ್ತವಾಗಿದೆ. ಅದು ಬಹಳ ಜನಪ್ರಿಯವಾದ್ದರಿಂದ ಪ್ರಪಂಚದಾದ್ಯಂತ ಜನರು ಅದನ್ನು ಅನುಸರಿಸುತ್ತಲೂ ಇದ್ದಾರೆ. ಪತಂಜಲಿ ಮಹರ್ಷಿಗಳು ಶೋಧಿಸಿದ ಯೋಗ ಮಾರ್ಗವನ್ನು ಚಿತ್ರದುರ್ಗ ಜಿಲ್ಲೆ ಮಲ್ಲಾಡಿಹಳ್ಳಿಯ ಅನಾಥಾಶ್ರಮದ ಪಾಲಕರು ‘ತಿರುಕ’ ನಾಮಾಂಕಿತ ಯೋಗಿ, ದಾರ್ಶನಿಕ, ಸಂತರಾದ ಶ್ರೀ ಶ್ರೀ ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು ಮುನ್ನಡೆಸಿದ್ದಾರೆ. ಶ್ರೇಷ್ಠ ಯೋಗ ಪಟುವಾಗಿ ಯೋಗದ ಮಹತ್ವವನ್ನು ಹಲವಾರು ಶಿಷ್ಯರ ಮೂಲಕ, ನೇರವಾಗಿ ಜನರಿಗೆ ಸರಳವಾಗಿ ತಿಳಿಸಿದ್ದಾರೆ. ಭಕ್ತಿಯೋಗ, ಜ್ಞಾನಯೋಗ, ಕರ್ಮ ಯೋಗ ಎಂಬ ಮೂರು ಪಾರಮಾರ್ಥಿಕಯೋಗ ವಿಧಾನಗಳನ್ನೂ ಶ್ರೀಮದ್ಭಗವದ್ಗೀತೆಯಲ್ಲಿ ವಿವರಿಸಿ ಹೇಳಲಾಗಿದೆ.
ಮನೋದೈಹಿಕ ಒತ್ತಡದ ಕಾಯಿಲೆಗಳಿಗೆ ಔಷಧಿಯಾಗಲಿ, ಶಸ್ತ್ರಚಿಕಿತ್ಸೆಯಾಗಲಿ ತಾಗುವುದಿಲ್ಲ. ದೈಹಿಕ ಮಾನಸಿಕ ವ್ಯಾಯಾಮ ರೂಪವಾದ ಯೋಗಾಸನ, ಪ್ರಾಣಾಯಾಮ, ಧ್ಯಾನ ಮುಂತಾದವುಗಳೇ ಈ ರೋಗನಿವಾರಣೆಗಿರುವ, ವೆಚ್ಚವಿಲ್ಲದ ಉತ್ತಮ ಸಾಧನ. ನಮ್ಮ ದೇಹ, ಮನಸ್ಸು, ಬುದ್ಧಿಗಳ ಶಕ್ತಿಯ ಬಹು ಭಾಗವನ್ನು ಇಂದು ನಾವು ಬಳಸುತ್ತಿಲ್ಲ. ಯಾವುದೇ ವಸ್ತು ಅಥವಾ ಶಕ್ತಿಯನ್ನು ಬಳಸದೇ ಇದ್ದರೆ ಅದು ತುಕ್ಕು ಹಿಡಿದಂತಾಗಿ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಇದು ಪ್ರಕೃತಿ ನಿಯಮ. ಯೋಗಾಭ್ಯಾಸದಿಂದ ದೇಹ, ಮನಸ್ಸು ಬುದ್ಧಿಗಳನ್ನು ಸರಿಯಾಗಿ ಬಳಸುತ್ತ ಚುರುಕಾಗಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಆಗ ಶಕ್ತಿ ಕುಂದದೇ ಹಿಗ್ಗುತ್ತ ಹೋಗುತ್ತದೆ. ನಮ್ಮ ಅಗಾಧ ನಿಗೂಢಶಕ್ತಿಯ ಬಳಕೆ ಸರಿಯಾದ ರೀತಿಯಲ್ಲಿ ಬಳಕೆಯಾದರೆ, ಸ್ವಾಭಾವಿಕವಾಗಿಯೇ ವ್ಯಕ್ತಿ, ಜೀವನದಲ್ಲಿ ಪ್ರಗತಿ ಸಾಧಿಸುತ್ತಾನೆ. ಆಗ ಸಮಾಜವೂ ಮುಂದೆ ಬರುತ್ತದೆ.
ಮೌನ ಬಂಗಾರ, ಧ್ಯಾನ ವಜ್ರ
ಧ್ಯಾನ ಮತ್ತು ಮನಸ್ಸು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ಧಾನ್ಯ ನಮ್ಮ ದೇಹವನ್ನು ಪೋಷಣೆ ಮಾಡಿದರೆ, ಧ್ಯಾನ ನಮ್ಮ ಮನಸ್ಸನ್ನು ಪೋಷಣೆ ಮಾಡುತ್ತದೆ. ಧಾನ್ಯಕ್ಕೂ, ಧ್ಯಾನಕ್ಕೂ ಎಷ್ಟು ವ್ಯತ್ಯಾಸವಿದೆ ಎಂಬುದನ್ನು ಗಮನಿಸಬೇಕು. ಧ್ಯಾನ ಅನ್ನುವುದು ಮಾಡುವಂತದ್ದಲ್ಲ, ಆಗುವಂತದ್ದು. ಧ್ಯಾನ ಮಾಡುವುದು ಬಹಳ ಸರಳ. ಇದನ್ನು ಮಾಡಬೇಕಾದರೆ ಯಾವುದರ ಅವಶ್ಯಕತೆಯೂ ಇಲ್ಲ. ಧ್ಯಾನ ಅನ್ನುವುದು ನಾವು ಎಲ್ಲೋ ಒಂದುಕಡೆ ಕುಳಿತುಕೊಂಡು ಬೆನ್ನನ್ನು ನೆಟ್ಟಗೆ ಇಟ್ಟುಕೊಂಡು (ಇಲ್ಲವಾದರೆ ನಿದ್ದೆ ಬರುತ್ತದೆ) ಕಣ್ಮುಚ್ಚಿಕೊಂಡು ಮೌನವಾಗಿ ಕೂರುವುದು.
ಮೂಗಿನ ಮೂಲಕ ಒಳ ತೆಗೆದುಕೊಳ್ಳುವ ಉಸಿರನ್ನು, ಮೂಗಿನಿಂದ ಹೊರ ಹೋಗುವ ಉಸಿರನ್ನು ಗಮನಿಸುವುದು. ಇದು ಬಹುತೇಕ ಧ್ಯಾನವನ್ನು ಆರಂಭಿಸುವ ಒಂದು ಹಂತ. ಧ್ಯಾನ ಮಾಡುವಾಗ ಮನಸ್ಸನ್ನು ನಿಯಂತ್ರಣ ಮಾಡಲಿಕ್ಕೆ ಪ್ರಯತ್ನಿಸಬಾರದು. ಮನಸ್ಸು ಎನ್ನುವುದು ಮಂಗ ಇದ್ದಂತೆ. ಮನಸ್ಸು ಚಂಚಲ, ಓಡಾಡುತ್ತಿರುತ್ತದೆ. ಅಲೆಗಳ ಮೇಲೆ ಅಲೆಗಳು ಉಂಟಾಗುತ್ತವೆ. ಈ ಅಲೆಗಳು ಬರುವುದನ್ನು ಮೊದಲು ನಿಧಾನಿಸಬೇಕು. ಈ ಅಲೆಗಳು ಉಂಟಾಗುವ ಕಾರಣ ನಮ್ಮಲ್ಲಿನ ಏರುಪೇರಿನಿಂದ. ಧ್ಯಾನ ಮಾಡುವ ಮುನ್ನ ಮೌನವನ್ನು ಅಭ್ಯಾಸ ಮಾಡಬೇಕು.
