ಶಿವಯೋಗ - ಪಾಸಿಟಿವ್ ತಮ್ಮಯ್ಯ
ಶಿವಯೋಗ ಚೌಡಿಕಟ್ಟೆ– ಶ್ರೀ ಪಾಸಿಟಿವ್ ತಮ್ಮಯ್ಯ ಗುರುಗಳ ಸನ್ಮಾರ್ಗದ ಸಹಜ ಕೃಷಿ, ಸಹಜ ಆಹಾರ, ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಅಭಿಯಾನ. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಚೌಡಿಕಟ್ಟೆ ಗ್ರಾಮೀಣ ಪರಿಸರ ಶ್ರೀ ಪಾಸಿಟಿವ್ ತಮ್ಮಯ್ಯ ಗುರುಗಳ ತಪೋಭೂಮಿ. ಗ್ರಾಮದ ಹೊರಗೆ ಪ್ರಕೃತಿಯ ಮಡಿಲಲ್ಲಿ ನಾಲ್ಕು ದಶಕಗಳಿಂದ ಸಹಜ ಕೃಷಿ ಮಾಡುತ್ತಾ ಅದರ ಖುಷಿಯನ್ನು ಅನುಭವಿಸುತ್ತಾ ಸಮಾಜಕ್ಕೂ ಹಂಚುತ್ತಿದ್ದಾರೆ. ಭೂಮಿ ಮತ್ತು ಜನರ ಆರೋಗ್ಯದ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿ ವಿಷಮುಕ್ತ ಭೂಮಿಯ ಫಲವತ್ತತೆ ಕಾಪಾಡಿಕೊಂಡು ಆ ಮೂಲಕ ಸಮಸ್ತ ಜನರ ಆರೋಗ್ಯ ಕಾಪಾಡುವುದರ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಅದಕ್ಕಾಗಿ ಯೋಗ ಮತ್ತು ಧ್ಯಾನವನ್ನು ಬ್ರಹ್ಮಾಸ್ತ್ರವನ್ನಾಗಿ ಬಳಸಿಕೊಂಡಿದ್ದಾರೆ. ʻಶಿವಯೋಗ ದೇಸೀ ಗೋಶಾಲೆʼ ಟ್ರಸ್ಟ್ ಸ್ಥಾಪಿಸಿ ಕಾರ್ಯೋನ್ಮುಖರಾಗಿದ್ದಾರೆ.
ಶಿವಯೋಗ ಚೌಡಿಕಟ್ಟೆ – ಶ್ರೀ ಪಾಸಿಟಿವ್ ತಮ್ಮಯ್ಯ ಗುರುಗಳ ಸನ್ಮಾರ್ಗದ ಸಹಜ ಕೃಷಿ, ಸಹಜ ಆಹಾರ, ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಅಭಿಯಾನ. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಚೌಡಿಕಟ್ಟೆ ಗ್ರಾಮೀಣ ಪರಿಸರ ಶ್ರೀ ಪಾಸಿಟಿವ್ ತಮ್ಮಯ್ಯ ಗುರುಗಳ ತಪೋಭೂಮಿ. ಗ್ರಾಮದ ಹೊರಗೆ ಪ್ರಕೃತಿಯ ಮಡಿಲಲ್ಲಿ ನಾಲ್ಕು ದಶಕಗಳಿಂದ ಸಹಜ ಕೃಷಿ ಮಾಡುತ್ತಾ ಅದರ ಖುಷಿಯನ್ನು ಅನುಭವಿಸುತ್ತಾ ಸಮಾಜಕ್ಕೂ ಹಂಚುತ್ತಿದ್ದಾರೆ. ಭೂಮಿ ಮತ್ತು ಜನರ ಆರೋಗ್ಯದ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿ ವಿಷಮುಕ್ತ ಭೂಮಿಯ ಫಲವತ್ತತೆ ಕಾಪಾಡಿಕೊಂಡು ಆ ಮೂಲಕ ಸಮಸ್ತ ಜನರ ಆರೋಗ್ಯ ಕಾಪಾಡುವುದರ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಅದಕ್ಕಾಗಿ ಯೋಗ ಮತ್ತು ಧ್ಯಾನವನ್ನು ಬ್ರಹ್ಮಾಸ್ತ್ರವನ್ನಾಗಿ ಬಳಸಿಕೊಂಡಿದ್ದಾರೆ. ʻಶಿವಯೋಗ ದೇಸೀ ಗೋಶಾಲೆʼ ಟ್ರಸ್ಟ್ ಸ್ಥಾಪಿಸಿ ಕಾರ್ಯೋನ್ಮುಖರಾಗಿದ್ದಾರೆ.
ಪರಮಪೂಜ್ಯ ಶ್ರೀ ಶ್ರೀ ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು
ಚಿತ್ರದುರ್ಗ ಜಿಲ್ಲೆ ಮಲ್ಲಾಡಿಹಳ್ಳಿಯ ಅನಾಥಾಶ್ರಮದ ಪಾಲಕರು ‘ತಿರುಕ’ ನಾಮಾಂಕಿತ ಬ್ರಹ್ಮಭೂತ, ಮಾನವ ಪ್ರೇಮಿ, ಯೋಗಿ, ದಾರ್ಶನಿಕ, ಸಂತರಾದ ಪರಮಪೂಜ್ಯ ಶ್ರೀ ಶ್ರೀ ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳ ಶಿಷ್ಯರಾದ ಶ್ರೀ ಪಿ.ಪಿ. ತಮ್ಮಯ್ಯ (ಪಾಸಿಟಿವ್ ತಮ್ಮಯ್ಯ) ರವರು ಶ್ರೀ ಪಿ.ಎ. ಪೊನ್ನಣ್ಣ ಹಾಗೂ ಶ್ರೀಮತಿ ಪಿ.ಪಿ. ಪೂವಮ್ಮ ರವರ ಹಿರಿಯ ಪುತ್ರರಾಗಿ 05-01-1951ರಂದು ಮೈಸೂರಿನಲ್ಲಿ ಜನಿಸಿದರು. ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿದ ಇವರು ಯೋಗ ಮತ್ತು ಕೃಷಿ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿರುತ್ತಾರೆ. ಪ್ರಕೃತಿ ಚಿಕಿತ್ಸೆ ಕ್ಷೇತ್ರದಲ್ಲಿಯೂ ಹೆಚ್ಚು ಪರಿಣಿತಿ ಹೊಂದಿ ಯೋಗಗುರುಗಳಾಗಿ, ಪ್ರಗತಿಪರ ರೈತರಾಗಿ ತಮ್ಮ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ತಂದೆಯವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ನಂತರ ಮೈಸೂರು ಮಹಾರಾಜರ ಅಂಗರಕ್ಷಕರಾಗಿಯೂ ಕೆಲವು ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. ವಿದ್ಯಾಭ್ಯಾಸ ಪ್ರಾರಂಭವಾಗಿದ್ದು ಹುಣಸೂರು ತಾಲ್ಲೂಕಿನ ಚೌಡಿಕಟ್ಟೆ ಗ್ರಾಮದಲ್ಲಿ. ಸಣ್ಣ ವಯಸ್ಸಿನಲ್ಲಿಯೇ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕೆಂದು ತಮ್ಮ ಮಾತೃಶ್ರೀ ರವರಿಂದ ಅರಿತಿದ್ದ ಶ್ರೀಯುತರು, ವಿದ್ಯಾಭ್ಯಾಸದ ನಂತರ ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರಸ್ವಾಮಿಗಳ ಆಶ್ರಮದಲ್ಲಿ ಯೋಗ ತರಬೇತಿ ಪಡೆದುಬಂದು ಇದರೊಂದಿಗೆ ಹೋಮಿಯೋಪತಿ ಹಾಗೂ ಆಯುರ್ವೇದವನ್ನೂ ಸಹ ಅಭ್ಯಸಿಸಿ ಮುನ್ನಡೆದರು.
1951-52ರಲ್ಲಿ ಮಾಜಿ ಸೈನಿಕರ 2ನೇ ಗ್ರಾಮವಾಗಿ ಚೌಡಿಕಟ್ಟೆ ಆರಂಭವಾಯಿತು. ಇಲ್ಲಿ ತಂದೆಯವರಿಗೆ ಮಾಜಿ ಸೈನಿಕರ ಕೋಟಾದಲ್ಲಿ ಸರ್ಕಾರದಿಂದ ಭೂಮಿ ಮಂಜೂರಾಯಿತು. ಆಗಿನಿಂದಲೂ ಇವರು ಕೃಷಿ ಮಾಡುತ್ತಾ ಬಂದಿದ್ದು, 1980ರಿಂದ ರಾಸಾಯನಿಕ ಕೃಷಿ ಪದ್ಧತಿ ಬಿಟ್ಟು ಸಹಜ ಕೃಷಿ ಪದ್ಧತಿಯಲ್ಲಿ ವ್ಯವಸಾಯ ಮಾಡಲು ತಮ್ಮ ತಂದೆಯವರನ್ನು ಮಾತೃಶ್ರೀ ಮುಖೇನ ಒಪ್ಪಿಸಿದರು. ಕ್ರಮೇಣ ಅವರ ಭೂಮಿಯನ್ನು ಸಹಜ ಕೃಷಿಗೆ ಬದಲಾಯಿಸಿದರು. ಶ್ರೀಯುತರು ತಮ್ಮ ಒಂಟಿ ಬದುಕಿನಲ್ಲಿಯೂ ಅಂದಿನಿಂದ ಇಂದಿನವರೆಗೆ ಸಹಜ ಕೃಷಿಯನ್ನು ಯಶಸ್ವಿಯಾಗಿ ಮಾಡುತ್ತಾ ಬಂದಿರುತ್ತಾರೆ.
ಹುಣಸೂರು ನಗರದಲ್ಲಿ ಒಂದು ಯೋಗ ಶಾಲೆಯನ್ನು ಸಹಾ ಪ್ರಾರಂಭಿಸಿದರು. ಅದು ಈಗಲೂ ಚಾಲ್ತಿಯಲ್ಲಿದೆ. ಇಲ್ಲಿ ಅನೇಕರು ಇಂದಿಗೂ ಯೋಗ ಹಾಗೂ ಪ್ರಾಣಯಾಮಗಳನ್ನು ದಿನಂಪ್ರತಿ ಅಭ್ಯಸಿಸುತ್ತಿದ್ದಾರೆ. ಇದರಿಂದ ಸಾವಿರಾರು ಜನರಿಗೆ ಪ್ರಯೋಜನವಾಗಿದೆ. ನಾಡೋಜ ಎಲ್. ನಾರಾಯಣರೆಡ್ಡಿಯವರ ನೈಸರ್ಗಿಕ ಕೃಷಿ ಪದ್ಧತಿಯಿಂದಲೂ ತಮ್ಮಯ್ಯರವರು ಪ್ರಭಾವಿತರಾಗಿ ಅವರಿಂದಲೂ ತಿಳಿಯಲ್ಪಟ್ಟ ಅನೇಕ ನೈಸರ್ಗಿಕ ಕೃಷಿ ವಿಧಾನಗಳನ್ನು ತಾನೊಬ್ಬನೇ ಅನುಸರಿಸುವುದು ಸರಿಯಲ್ಲವೆಂದೆನಿಸಿ, ಇತರರಿಗೂ ಈ ಕೃಷಿ ಜ್ಞಾನವನ್ನು ಧಾರೆ ಎರೆಯಬೇಕೆಂದು ಅವರು ನಿರ್ಧರಿಸಿದರು. ಇದರೊಂದಿಗೆ ತಮ್ಮ ಗುರುಗಳಾದ ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರಸ್ವಾಮಿಗಳವರಿಂದ ಕಲಿತ ಆರೋಗ್ಯ ಹಾಗೂ ಯೋಗ ವಿದ್ಯೆಯನ್ನು ಹೆಚ್ಚು ಹೆಚ್ಚು ಪ್ರಚಲಿತಗೊಳಿಸಬೇಕೆಂದು ಪಣತೊಟ್ಟರು. ಇದರ ನಿಮಿತ್ತವೇ ಅವರ ಕೃಷಿ ಭೂಮಿಯ ಒಂದು ಭಾಗದಲ್ಲಿ “ವಿಶ್ವ ಆರೋಗ್ಯ ಯೋಗ ಕೇಂದ್ರ”, “ಶಿವಯೋಗ ದೇಸೀ ಗೋ ಶಾಲೆ”, “ಎತ್ತಿನ ಎಣ್ಣೆಗಾಣದ ಘಟಕ”, “ಆರು ಮಧ್ಯಮ ಗಾತ್ರದ ಕೃತಕ ಕೆರೆಗಳು” ಹಾಗೂ ಒಂದು ಎಕರೆ “ಮಾದರಿ ತೋಟವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸುತ್ತಾ ಬಂದರು.
ಇಂದಿಗೂ ತಿಂಗಳಲ್ಲಿ ಒಂದು ದಿವಸ (2ನೇ ಭಾನುವಾರ) ನಿಗದಿಪಡಿಸಿಕೊಂಡು ನಿರಂತರವಾಗಿ ಆಸಕ್ತರಿಗೆ “ನೈಸರ್ಗಿಕ/ಸಹಜ ಕೃಷಿ ಹಾಗೂ ಆರೋಗ್ಯ ಸಂರಕ್ಷಣೆ” ವಿಷಯದಲ್ಲಿ ಒಂದು ಕಾರ್ಯಾಗಾರವನ್ನು ನಡೆಸಿಕೊಂಡು ಬರುತ್ತಿದ್ದಾರೆ. ತಮ್ಮ ತೋಟವನ್ನು ಭೇಟಿ ಮಾಡಲು ಬರುವ ನೂತನ ರೈತಾಪಿಗಳಿಗೆ ಕೃಷಿ ಮಾರ್ಗದರ್ಶನ ನೀಡುವುದರ ಜೊತೆಗೆ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕ್ಷೇತ್ರದಲ್ಲಿ ಪಡೆದ ಪ್ರಾವೀಣ್ಯತೆಯನ್ನು ಜನರುಗಳಿಗೆ ಹೇಳಿಕೊಡುತ್ತಿದ್ದಾರೆ. ಜಿಲ್ಲೆಯ ಸುತ್ತಮುತ್ತಲಿನ ಹಾಗೂ ಇತರೆ ಜಿಲ್ಲೆಗಳ ಅನೇಕ ಶಾಲಾ-ಕಾಲೇಜು ವಿದ್ಯಾರ್ಥಿಗಳು ಕೂಡ ತಂಡ ತಂಡವಾಗಿ ಇವರ ತೋಟಕ್ಕೆ ಬಂದು ಹೋಗುತ್ತಿರುತ್ತಾರೆ. ನಗರ ಜೀವನ ಹಾಗೂ ಕಾರ್ಪೊರೇಟ್ ವೃತ್ತಿಯ ಒತ್ತಡಗಳಿಗೆ ಸಿಲುಕಿ ಬೇಸತ್ತು ಆರೋಗ್ಯ ಸಮಸ್ಯೆಗಳಿಂದ ಬಾಧಿತರಾಗಿರುವ; ಗ್ರಾಮೀಣ ಪರಿಸರದಲ್ಲಿ ಜೀವನ ಸಾಗಿಸುವ ಆಸೆಯಿಂದ ಬಹಳಷ್ಟು ಮಂದಿ ಶಿವಯೋಗ ಸಹಜ ಕೃಷಿ ಹಾಗೂ ಕ್ಷೇಮ ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ.
ಶ್ರೀ ಪಾಸಿಟಿವ್ ತಮ್ಮಯ್ಯ ಗುರುಗಳ ಕೃಷಿ ಹಾಗೂ ಜೀವನ ಪಾಠಕ್ಕೆ ಮಾರುಹೋದ ಸಾವಿರಾರು ಮಂದಿ ತಮ್ಮ ಸ್ವಂತ ಜಮೀನಿನಲ್ಲಿ ಅಥವಾ ಖರೀದಿಸಿದ ಜಮೀನಿನಲ್ಲಿ ಗುರುಗಳ ಮಾರ್ಗದರ್ಶನದಲ್ಲಿ ತೋಟಗಳನ್ನು ನಿರ್ಮಿಸಿಕೊಂಡು ನೆಮ್ಮದಿಯ ಬದುಕನ್ನು ಕಂಡುಕೊಂಡಿದ್ದಾರೆ. ಜತೆಗೆ ಆದಾಯವನ್ನೂ ಗಳಿಸುತ್ತಿದ್ದಾರೆ.
ಶ್ರೀ ಪಾಸಿಟಿವ್ ತಮ್ಮಯ್ಯ ಗುರುಗಳ ಕೃಷಿ ಹಾಗೂ ಜೀವನ ಪಾಠಕ್ಕೆ ಮಾರುಹೋದ ಸಾವಿರಾರು ಮಂದಿ ತಮ್ಮ ಸ್ವಂತ ಜಮೀನಿನಲ್ಲಿ ಅಥವಾ ಖರೀದಿಸಿದ ಜಮೀನಿನಲ್ಲಿ ಗುರುಗಳ ಮಾರ್ಗದರ್ಶನದಲ್ಲಿ ತೋಟಗಳನ್ನು ನಿರ್ಮಿಸಿಕೊಂಡು ನೆಮ್ಮದಿಯ ಬದುಕನ್ನು ಕಂಡುಕೊಂಡಿದ್ದಾರೆ. ಜತೆಗೆ ಆದಾಯವನ್ನೂ ಗಳಿಸುತ್ತಿದ್ದಾರೆ.
