ಕೃಷಿ ಮತ್ತು ಕ್ಷೇಮ ತರಬೇತಿ
ಶ್ರೀ ಪಾಸಿಟಿವ್ ತಮ್ಮಯ್ಯ ಗುರುಗಳು ತಾವು ಹುಟ್ಟಿ ಬಾಳುತ್ತಿರುವ ತಮ್ಮ ಸಮಾಜದ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದು, ಪರಿಸರದ ಭಾಗವಾಗಿರುವ ಮಣ್ಣು, ನೀರು, ಗಾಳಿ, ಪಶು-ಪಕ್ಷಿ, ಗಿಡ-ಮರ, ಕ್ರಿಮಿ-ಕೀಟಗಳ ಬಗೆಗಿನ ಅಪಾರ ಕಕ್ಕುಲಾತಿ ಮತ್ತು ಅರಿವಿನ ಕಾರಣಕ್ಕೆ ಹುಟ್ಟೂರು ಚೌಡಿಕಟ್ಟೆಯಲ್ಲಿ ಶಿವಯೋಗ ದೇಸೀ ಗೋಶಾಲೆ ಸಂಸ್ಥೆ ಆರಂಭಿಸಿ ಸುಸ್ಥಿರ ಸಮಾಜದ ಅಭಿಯಾನ ಆರಂಭಿಸಿದ್ದಾರೆ. ತಮ್ಮ ಸನ್ಮಾರ್ಗದ ಸಹಜ ಕೃಷಿ, ಸಹಜ ಆಹಾರ, ಪ್ರಕೃತಿ ಚಿಕಿತ್ಸೆ ಹಾಗೂ ಯೋಗದ ಅನುಕೂಲಗಳನ್ನು ವ್ಯಾಪಕವಾಗಿ ಪ್ರಚುರ ಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ʻʻಕೃಷಿ ಮತ್ತು ಕ್ಷೇಮ ತರಬೇತಿ” ಯನ್ನು ನಿರಂತರವಾಗಿ ನಡೆಸಿಕೊಂಡು ಆಸಕ್ತರಿಗೆ ಜ್ಞಾನಾಮೃತವನ್ನು ಉಣಬಡಿಸುತ್ತಿದ್ದಾರೆ.
ಆರೋಗ್ಯ ಚೆನ್ನಾಗಿರಬೇಕಾದರೆ ಕೃಷಿಯು ಚೆನ್ನಾಗಿರಬೇಕು. ಕೃಷಿ ಚೆನ್ನಾಗಿರಬೇಕಾದರೆ ಭೂಮಿಗೆ ಯಾವುದೇ ತರಹದ ಕೀಟನಾಶಕ, ಕಳೆನಾಶಕ ಹಾಗೂ ರಾಸಾಯನಿಕ/ರಸಗೊಬ್ಬರಗಳನ್ನು ಬಳಸಬಾರದು ಮತ್ತು ಬೆಂಕಿ ಇಡಬಾರದು. ಬೆಳೆಗೆ ತಕ್ಕಂತೆ ಮಿತವಾದ ನೀರನ್ನು ಬಳಸಬೇಕು. ಹೆಚ್ಚು ನೀರು ಬಳಸಿದಲ್ಲಿ ಮಣ್ಣಿನಲ್ಲಿರುವ ಇಂಗಾಲದ ಅಂಶ ಕಡಿಮೆಯಾಗುತ್ತದೆ. ಇಂಗಾಲದ ಅಂಶ ಕಡಿಮೆಯಾದಲ್ಲಿ ಮಣ್ಣು ಹೆಚ್ಚು ನೀರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಪ್ರತಿ ಮಾಸದ 2ನೇ ಭಾನುವಾರ ಬೆಳಗ್ಗೆ 8.00 ಗಂಟೆಯಿಂದ ಸಂಜೆ 4.00 ಗಂಟೆವರೆಗೆ “ಶಿವಯೋಗ ದೇಸೀ ಗೋಶಾಲೆ, ಚೌಡಿಕಟ್ಟೆ ಗ್ರಾಮ, ಹುಣಸೂರು ತಾಲ್ಲೂಕು, ಮೈಸೂರು ಜಿಲ್ಲೆʼʼ, ಇಲ್ಲಿ ಈ ಕೆಳಕಂಡ ವಿಷಯಗಳ ಕುರಿತು ಒಂದು ದಿವಸದ ತರಬೇತಿ ಕಾರ್ಯಾಗಾರವನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಕ್ರಮಬದ್ಧವಾಗಿ ಕೃಷಿ ಮಾಡಿದಾಗ, ಕೃಷಿ ಯಾವಾಗಲೂ ಲಾಭದಾಯಕವೇ. ಕೃಷಿ ಭೂಮಿಯಲ್ಲಿ ಮೊದಲು ಇರಬೇಕಾದದ್ದು ಆರ್ಗ್ಯಾನಿಕ್ ಕಾರ್ಬನ್ (ಸಾವಯವ ಇಂಗಾಲ). ನಿಮ್ಮ ಭೂಮಿಯಲ್ಲಿ ಇದನ್ನು ಕ್ರಮೇಣ ಹೇಗೆ ವೃದ್ಧಿಸಿಕೊಳ್ಳಬೇಕು? ಹಸಿರೆಲೆ ಗೊಬ್ಬರವನ್ನು ನಾವೇ ಹೇಗೆ ಅಭಿವೃದ್ದಿಗೊಳಿಸಿಕೊಳ್ಳಬೇಕು? ಯಾವ ಮಣ್ಣಿಗೆ ಯಾವ ಬೆಳೆಯನ್ನು ಹಾಕಬೇಕು? ಬೇಲಿ ನಿರ್ವಹಣೆ ಹೇಗೆ ಮಾಡಬೇಕು? ಬೇಲಿಯ ಪಕ್ಕದಲ್ಲಿ ಯಾವ ಯಾವ ಗಿಡಗಳನ್ನು ಹಾಕಬೇಕು? ಒಂದು ಗಿಡಕ್ಕೆ ನೀರಿನ ಅವಶ್ಯಕತೆ ಎಷ್ಟಿದೆ? ನಿಮ್ಮ ಭೂಮಿಗೆ ಎಷ್ಟು ಗೊಬ್ಬರದ ಅವಶ್ಯಕತೆ ಇದೆ? ಮುಚ್ಚಿಗೆ (ಮಲ್ಚಿಂಗ್), ಲೈವ್ ಮಲ್ಚಿಂಗ್ ಅಂದರೆ ಏನು? ಹೊಸದಾಗಿ ಜಮೀನು ಖರೀದಿಸುವವರು ಅನುಸರಿಸಬೇಕಾದ ಕ್ರಮಗಳೇನು? ಯಾವ ಭೂಮಿ ಸಹಜ ಕೃಷಿಗೆ ಯೋಗ್ಯ? … ಹೀಗೆ ಹಲವು ವಿಷಯಗಳ ಬಗ್ಗೆ ಕೃಷಿ ತರಬೇತಿ ನೀಡಲಾಗುತ್ತದೆ. ಸಾವಿರಾರು ಮಂದಿ ಕೃಷಿ ತರಬೇತಿ ಲಾಭ ಪಡೆದಿದ್ದಾರೆ.
ಯೋಗ-ಕ್ಷೇಮ
ಇನ್ನು ಜನರ ಯೋಗ-ಕ್ಷೇಮ ಭೂಮಿ, ನೀರಿನ ಶುದ್ಧತೆ ಮತ್ತು ಬೆಳೆಯುವ ವಿಷಮುಕ್ತ ಆಹಾರವನ್ನು ಅವಲಂಬಿಸಿದೆ. ನಾವು ತಿನ್ನುವ ಆಹಾರ ವಿಷಮುಕ್ತವಾಗಿದ್ದರೆ ಕಾಯಿಲೆಗಳಿಂದ ದೂರ ಉಳಿದು ಜೀವನ ಸಾಗಿಸಬಹುದು. ಹಾಗಾದರೆ ನಾವು ತಿನ್ನುವ ಆಹಾರದ ಗುಣಮಟ್ಟ ಹೇಗಿರಬೇಕು? ದಿನಕ್ಕೆ ಎಷ್ಟು ಬಾರಿ, ಯಾವ ಪ್ರಮಾಣದಲ್ಲಿ, ಎಂತಹ ಆಹಾರ ಬಳಸಬೇಕು ಎಂಬುದರ ಬಗ್ಗೆ ತಿಳಿಸಲಾಗುತ್ತದೆ. ತಿಂದ ಆಹಾರ ಜೀರ್ಣ ಆಗಿ ಗಟ್ಟಿಮುಟ್ಟಾದ ದೇಹ ಮತ್ತು ಮನಸ್ಸಿಗೆ ಯೋಗಾಭ್ಯಾಸ ಮತ್ತು ಧ್ಯಾನ ಇಂದಿನ ಅತ್ಯಗತ್ಯ ಪೂರಕ ಅಭ್ಯಾಸಗಳಾಗಿವೆ. ಈ ಎಲ್ಲ ಸಂಗತಿಗಳ ಬಗ್ಗೆ ಕ್ಷೇಮ ತರಬೇತಿಯಲ್ಲಿ ತಿಳಿಸಲಾಗುತ್ತದೆ. ನಗರ ಜೀವನ, ಕಾರ್ಪೊರೇಟ್ ಕಂಪನಿಗಳ ವೃತ್ತಿ, ಶ್ರೀಸಾಮಾನ್ಯರ ಆಧುನಿಕ ಜೀವನ ಶೈಲಿಯ ಒತ್ತಡಗಳಿಂದ ಪಾರಾಗುವುದು ಹೇಗೆ? ಸಂತೃಪ್ತ, ಸುಖೀ ಜೀವನ ಬಾಳುವುದು ಹೇಗೆ ಎಂಬುದರ ಬಗ್ಗೆ ಅರಿವು ಮೂಡಿಸಲಾಗುತ್ತದೆ.
ನೋಂದಣಿಗೆ
ಪ್ರಜ್ವಲ್ ಕುಮಾರ್
74833 22089
ಯೋಗೇಶ್ ಮಂಡ್ಯ
99725 14513
