ಪ್ರಕೃತಿ ಚಿಕಿತ್ಸೆ
ನಮ್ಮ ಕಾಯಿಲೆಗಳಿಗೆ ನಾವು ಈಗೀಗ ಹೆಚ್ಚಾಗಿ ಅವಲಂಬಿತವಾಗಿರುವ ಅಲೋಪತಿಗೆ 150-200 ವರ್ಷಗಳ ಇತಿಹಾಸವಿದ್ದರೆ ನ್ಯಾಚುರೋಪತಿಗೆ ಅಂದರೆ ಪ್ರಕೃತಿ ಚಿಕಿತ್ಸೆಗೆ ಸಾವಿರಾರು ವರ್ಷಗಳ ದೀರ್ಘ ಇತಿಹಾಸವಿದೆ. ವೈದ್ಯ ಪದ್ಧತಿಯು ಒಂದೊಂದು ಕಡೆ ಒಂದೊಂದು ರೀತಿಯಲ್ಲಿದ್ದು, ಭಾರತದಲ್ಲಿನ ವೈದ್ಯಪದ್ಧತಿಗಳಲ್ಲಿ ನ್ಯಾಚುರೋಪತಿ ಎಲ್ಲಾ ಪದ್ಧತಿಗಳಿಗಿಂತ ಶ್ರೇಷ್ಠವಾದದ್ದು. ಇದು ನಿಜವಾದ ಭಾರತೀಯ ಪದ್ಧತಿಯಾಗಿದ್ದು, ಈ ಚಿಕಿತ್ಸೆಗೆ ಯಾವುದೇ ಖರ್ಚಿಲ್ಲ. ಇದಕ್ಕೆ ಯಾವ ಡಿಗ್ರಿ ಸರ್ಟಿಫಿಕೇಟ್ ಬೇಕಾಗಿರುವುದಿಲ್ಲ. ಪ್ರಕೃತಿ ಚಿಕಿತ್ಸೆಯನ್ನು ಯಾರು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಬರುತ್ತೀರೋ ಅವರಿಗೆ ಕಾಯಿಲೆಗಳೇ ಬರುವುದಿಲ್ಲ.
ಆರೋಗ್ಯದ ನಿಜವಾದ ಮೂಲ ಪ್ರಕೃತಿ ಚಿಕಿತ್ಸೆ. ಆಲೋಪತಿ ಪದ್ಧತಿಗಿಂತ ಪ್ರಕೃತಿ ಚಿಕಿತ್ಸೆ, ಆಯುರ್ವೇದ, ಹೋಮಿಯೋಪತಿ ಪದ್ಧತಿಯು ಆರೋಗ್ಯಕರ ಆಗಿರುವುದರಿಂದ ಇವುಗಳನ್ನು ಹೆಚ್ಚು ಅರಿಯಬೇಕಿದೆ. ದಿನದಲ್ಲಿ ಎರಡು ಸಲ ಮಾತ್ರ ಹಿತ-ಮಿತವಾಗಿ ಊಟ ಮಾಡಬೇಕು, ಸೂರ್ಯನ ಕಿರಣಕ್ಕೆ ಪ್ರತಿದಿನ ಕನಿಷ್ಠ 10-15 ನಿಮಿಷ ಮೈ ಒಡ್ಡಬೇಕು. ಒಂದು ಆಹಾರದಿಂದ ಇನ್ನೊಂದು ಆಹಾರಕ್ಕೆ ಚೆನ್ನಾಗಿ ಹಸಿವು ಆಗುವ ಹಾಗೆ ನೋಡಿಕೊಳ್ಳಬೇಕು. ಯಾವಾಗಲೂ ಆಹಾರವನ್ನು ಚೆನ್ನಾಗಿ ಅಗಿದು ತಿನ್ನಬೇಕು, ಸುಖವಾಗಿ ನಿದ್ದೆ ಮಾಡಬೇಕು. ದೇಹಕ್ಕೆ ಜಡತ್ವ ಕೊಡಬಾರದು, ಕೆಲಸ ಮಾಡುತ್ತಲೇ ಇರಬೇಕು. ನಿತ್ಯವೂ ವ್ಯಾಯಾಮ, ಯೋಗಾಸನ, ಪ್ರಾಣಯಾಮಗಳನ್ನು ಮಾಡಬೇಕು. ಜೀರ್ಣಾಂಗ ಕ್ರಿಯೆಗೆ ನಿಯಮಿತವಾಗಿ ವಿರಾಮ ಕೊಡಿ ಅಂದರೆ ವಾರಕ್ಕೊಮ್ಮೆ ಉಪವಾಸ ಕೈಗೊಳ್ಳಿ ಎಂದು ಅರ್ಥ. ಈ ಎಲ್ಲಾ ನಿಯಮಗಳನ್ನು ಅನುಸರಿಸಿಕೊಂಡು ಬನ್ನಿ, ಆರೋಗ್ಯಕರ ದೀರ್ಘಕಾಲದ ಬದುಕು ನಿಮಗೆ ಸಿಗುತ್ತದೆ. ಆದ್ದರಿಂದ ಸಂಶಯಗಳಿಲ್ಲದೆ ಪ್ರಕೃತಿ ಚಿಕಿತ್ಸೆ ಕ್ರಮವನ್ನು ಅನುಸರಿಸಿ.
ಸಣ್ಣ ವಯಸ್ಸಿನಿಂದಲೇ ಪ್ರಕೃತಿಗೆ ಹೊಂದಿಕೊಂಡು ಪ್ರಕೃತಿ ಚಿಕಿತ್ಸೆ ಅನುಸರಿಸುತ್ತಾ ಬಂದರೆ ಮನುಷ್ಯನಿಗೆ ಯಾವ ತರಹದ ಮಾರಕ ರೋಗವೂ ಅಂಟುವುದಿಲ್ಲ. ಪಂಚಭೂತಗಳಿಂದ ಆಗಿರುವುದೇ ಪ್ರಕೃತಿ. ವಿಶ್ವದಲ್ಲಿ ಪ್ರತಿಯೊಂದೂ ಉಂಟಾಗಿರುವುದು ಪಂಚಭೂತಗಳಿಂದ. ಪಂಚಭೂತಗಳೆಂದರೆ, ಅಗ್ನಿ, ವಾಯು, ಆಕಾಶ, ಭೂಮಿ ಮತ್ತು ಜಲ. ನಮ್ಮ ದೇಹ ಆಗಿರುವುದೇ ಈ ಪಂಚಭೂತಗಳಿಂದ. ನಮ್ಮ ಜೀವನ ಕ್ರಮವನ್ನು ತಿಳಿಸುವುದೇ ಈ ಪ್ರಕೃತಿ ಚಿಕಿತ್ಸೆ. ಆಹಾರ ಕ್ರಮ, ಯೋಚಿಸುವ ಕ್ರಮ, ಯೋಗ ಇವುಗಳೆಲ್ಲವೂ ಆ ಕ್ರಮಗಳು. ಆದ್ದರಿಂದ ಜೀವನ ಶೈಲಿಯನ್ನು, ಆಚಾರ ವಿಚಾರವನ್ನು, ಯೋಚನೆ ಮಾಡುವುದನ್ನು ಕೆಲಸ ಮಾಡುವುದನ್ನು ಎಲ್ಲವನ್ನೂ ಶುದ್ಧವಾಗಿಟ್ಟುಕೊಳ್ಳಿ.
