ಚಿಂತನ-ಮಂಥನ

ವಯಸ್ಸಿನಲ್ಲಿ ಎಷ್ಟೇ ಸಣ್ಣವರಿರಲಿ, ದೊಡ್ಡವರಿರಲಿ ಸಂಕೋಚವಿಲ್ಲದೆ ಬುದ್ಧಿವಂತರೆನಿಸಿಕೊಂಡ ಬಡ ಮಕ್ಕಳನ್ನು, ವಯಸ್ಸಾದ ಹಿರಿಯರನ್ನು ಗೌರವಿಸಬೇಕು. ಅವರ ನೈಜ ಸಲಹೆಗಳನ್ನು ಪಡೆಯಬೇಕು. ಎಷ್ಟೋ ವಿಚಾರಗಳು ನಮಗೆ ಗೊತ್ತಿರುವುದಿಲ್ಲ. ಗೊತ್ತಿಲ್ಲದಿರುವುದನ್ನು ಹಿರಿಯರಿಂದ ಕೇಳಿ ತಿಳಿದುಕೊಳ್ಳಬೇಕು. ಎಂದಿಗೂ ಹಿರಿಯರನ್ನು ಕಡೆಗಣಿಸಬಾರದು, ಗೌರವಿಸಬೇಕು. ಅದುವೇ ಮನುಷ್ಯತ್ವ.

ಇತ್ತೀಚಿನ ದಿನಗಳಲ್ಲಿ ಯುವಜನರು ಸಕಲ ಆಧುನಿಕ ಸೌಕರ್ಯಗಳನ್ನು ಅನುಭವಿಸುತ್ತಿದ್ದು, ಮನಸೋ ಇಚ್ಛೆ ಹಣವನ್ನು ಬಳಸಬಹುದಾಗಿದೆ. ಪಟ್ಟಣದ ಯುವಜನರ ಕೈನಲ್ಲಿ ಸಾಕಷ್ಟು ಹಣವಿದೆ, ಅದನ್ನು ಸದ್ಬಳಕೆಗಿಂತ ದುರ್ಬಳಕೆಗೆ ಹೆಚ್ಚು ವಿನಿಯೋಗ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಆದರೆ, ಅವರುಗಳು ಏನನ್ನು ತಿನ್ನಬೇಕೋ ಅದನ್ನು ಅವರು ತಿನ್ನುತ್ತಿಲ್ಲ. ಹಾಗಾಗಿ ನೂರಾರು ತರಹದ ಒಂದಿಲ್ಲೊಂದು ಕಾಯಿಲೆಗೆ ಗುರಿಯಾಗುತ್ತಿದ್ದಾರೆ.

ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ” ಎಂಬಂತೆ ಬಾಳಿನಲ್ಲಿ ಯಾರಿಗೂ ನೋವುಗಳನ್ನುಂಟುಮಾಡಬೇಡಿ. ಎಲ್ಲರನ್ನೂ ಪ್ರೀತಿಸಿ, ಎಲ್ಲರ ಜೊತೆ ಖುಷಿಯಾಗಿರಿ, ಲವಲವಿಕೆಯಿಂದಿರಿ, ಸಂತೋಷವಾಗಿರಿ. ನಿಮ್ಮ ಕೈಲಾದಷ್ಟು ಇತರರಿಗೆ ಸಹಾಯ ಮಾಡಿ. ಸಹಾಯ ಮಾಡಲಿಕ್ಕಾಗದಿದ್ದರೆ ಯಾರಿಗೂ ತೊಂದರೆ ಕೊಡಬೇಡಿ. ನಿಮಗೆಲ್ಲರಿಗೂ ಒಳ್ಳೆಯದಾಗಲಿ.

ಯಾವಾಗಲೂ ಶುದ್ಧವಾದ ಆಹಾರಗಳನ್ನು ಉಪಯೋಗಿಸಬೇಕು. ಅಂದರೆ ರಾಸಾಯನಿಕ ಮುಕ್ತವಾಗಿ ಬೆಳೆದ ಆಹಾರಗಳನ್ನು ನೈಸರ್ಗಿಕ ಕೃಷಿಕರಿಂದ ಪಡೆದು, ಹೆಚ್ಚಾಗಿ ಬೇಯಿಸದೇ ಇರುವ ಆಹಾರಗಳನ್ನು ಅಂದರೆ ಮೊಳಕೆ ಕಾಳುಗಳನ್ನು, ಹಣ್ಣು , ತರಕಾರಿಗಳನ್ನು ಸೇವಿಸಬೇಕು.

ಹೆಣ್ಣು ಮಕ್ಕಳು ವೈಭವದ ಜೀವನಕ್ಕೆ ಮಾರುಹೋಗದೆ, ಸರ್ಕಾರಿ ನೌಕರರನ್ನೇ ಮದುವೆಯಾಗಬೇಕು ಎನ್ನುವುದನ್ನು ಬಿಟ್ಟು ಅನ್ನ ನೀಡುವ ರೈತಾಪಿ ಜನರನ್ನೂ ವಿವಾಹವಾಗಬೇಕು. ಅನ್ನವಿಲ್ಲದಿದ್ದರೆ ಎಲ್ಲವೂ ಶೂನ್ಯ.

ಜಾಹೀರಾತುಗಳಿಗೆ ಮಾರು ಹೋಗಬೇಡಿ. ಯುವಕರು ಬಹಳ ಎಚ್ಚರಿಕೆಯಿಂದಿರಬೇಕು. ಬೀದಿಯಲ್ಲಿ ಸಿಕ್ಕಿದ್ದನ್ನೆಲ್ಲಾ ತಿನ್ನಬೇಡಿ. ರೋಗಗಳಿಗೆ ತುತ್ತಾಗುವಿರಿ. ಏನಾದರೂ ತಿನ್ನಬೇಕೆನಿಸಿದಾಗ ಒಂದು ಗ್ಲಾಸ್ ನೀರು ಕುಡಿಯಿರಿ ಇಲ್ಲವೇ ಒಂದು ಒಣ ಖರ್ಜೂರ ಅಥವಾ ಒಣದ್ರಾಕ್ಷಿ ಬಾಯಿಗೆ ಹಾಕಿಕೊಳ್ಳಿ.