ಚೌಡಿಕಟ್ಟೆ ಪಾಸಿಟಿವ್ ತಮ್ಮಯ್ಯ ಅವರ

ನಮ್ಮ: ಆರೋಗ್ಯ, ಆಹಾರ, ಜವಾಬ್ದಾರಿ

ಸಹಜ ಕೃಷಿ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಗುರುವಿನ ಅಕ್ಷರ ಪಯಣ

ಮುನ್ನುಡಿ

ಸರಳ ಆರೋಗ್ಯದತ್ತ ಸಾಧಕನ ತೋರುಬೆರಳು

ಸಾಧಕ, ಕೃಷಿಕ ತಮ್ಮಯ್ಯನವರು ಆರೋಗ್ಯ ಕುರಿತಾಗಿ ನೀಡಿದ ಧ್ವನಿ ಸಂದೇಶಗಳನ್ನು ಅಕ್ಷರಕ್ಕಿಳಿಸಿದ ಸಂಕಲನ ಇದು. ಈ ಕೃತಿ ತನ್ನ ಅನುಭವಾಧರಿತ ಸಲಹೆಗಳ ಕಾರಣಕ್ಕೆ ನಮ್ಮ ಗಮನ ಸೆಳೆಯುತ್ತದೆ.

ಆರೋಗ್ಯದ ಕುರಿತಾಗಿ ತಮ್ಮಯ್ಯನವರು ಆಳವಾಗಿ ಅಧ್ಯಯನ ಮಾಡಿದ್ದಾರೆ. ಈ ಅಧ್ಯಯನವನ್ನು ತಮ್ಮ ಜೀವನದಲ್ಲಿ ಪ್ರಯೋಗದ ಮೂಲಕ ದೃಢಪಡಿಸಿಕೊಂಡಿದ್ದಾರೆ. ಆದ್ದರಿಂದಲೇ ಇಲ್ಲಿನ ವಿವರಗಳು ಅಧಿಕೃತವಾಗಿ ಕಾಣಿಸುತ್ತವೆ.

ತಮ್ಮಯ್ಯನವರು ಮೂಲತಃ ಒಂದು ನಾಗರಿಕತೆಯ ವಶೀಕರಣದಿಂದಾಗುವ ಅಪಾಯಗಳ ಬಗ್ಗೆ ಇಲ್ಲಿ ಮಾತಾಡುತ್ತಿದ್ದಾರೆ. ಕಳೆದ ನಾಲೈದು ದಶಕಗಳಲ್ಲಿ ನಮ್ಮ ಆಹಾರ ಸಂಸ್ಕೃತಿಯ ಮೇಲೆ ದೊಡ್ಡ ಮಟ್ಟದ ದಾಳಿ ನಡೆದಿದೆ. ಈ ದಾಳಿ ‘ಜಂಕ್ ಫುಡ್’ ಎಂದು ನಾವು ಕರೆಯುವ ಆಹಾರಗಳಿಂದ ಹಿಡಿದು, ಬಣ್ಣ, ಗುಣಮಟ್ಟದ ಕೃತಕ ಸೂಚಿಗಳ ಮೂಲಕ ನಡೆದಿದೆ. ಬಿಳಿಯ ಅಕ್ಕಿ, ಫಿಲ್ಟರ್ಡ್ ಅಡುಗೆ ಎಣ್ಣೆ- ಹೀಗೆ ಈ ಸೂಚಿಗಳು ಸೂಕ್ಷ್ಮವಾಗಿ ನಮ್ಮ ಮನಸ್ಸುಗಳ ಮೇಲೆ ಧಾಳಿ ಮಾಡಿ ವಶೀಕರಣ ನಡೆಸಿವೆ.

ಕೃಷಿಯಲ್ಲಾದ ಬದಲಾವಣೆಗಳು ಇದಕ್ಕೆ ಪೂರಕವಾಗಿ ಕೆಲಸ ಮಾಡಿವೆ. ಬೀಜ, ಗೊಬ್ಬರ, ಕೃಷಿ ಕೆಲಸಗಳ ಯಾಂತ್ರೀಕರಣ, ಮಾರುಕಟ್ಟೆ … ಹೀಗೆ ಎಲ್ಲವೂ ನಿರ್ದಿಷ್ಟ ಜಾಗತಿಕ ಆರ್ಥಿಕತೆ ಮತ್ತು ವ್ಯಾಪಾರದ ಸೂಚಿಗಳಿಗನುಗುಣವಾಗಿ ಚಾಲೂಗೊಂಡಿವೆ. ಸರಕಾರ ಇದರಲ್ಲಿ ಬಲು ಉತ್ಸಾಹದಲ್ಲಿ ಕೈ ಜೋಡಿಸಿದೆ.

ಆದ್ದರಿಂದಲೇ ಪ್ರಾಥಮಿಕ ಆರೋಗ್ಯ ಸೂಚಿಗಳಾದ ಸ್ಥಳೀಯ ಆಹಾರದ ಮಹತ್ವ ಮೂಲೆಗುಂಪಾಗಿದೆ. ಇವುಗಳು ಅಂಚಿಗೆ ಸರಿದ ಕಾರಣಕ್ಕೇ ಆರೋಗ್ಯದ ಏರುಪೇರು ಉಲ್ಬಣ ಆಗುತ್ತಿದೆ. ಅಂದರೆ ಸರಿಯಾಗಿ ಗಮನಿಸಿದರೆ ಆರೋಗ್ಯದ ಕೋನದ ಮೂಲಕ ಇಡೀ ಜಾಗತಿಕ ಪಲ್ಲಟಗಳನ್ನು ಗುರುತಿಸಬಹುದು. ತಮ್ಮಯ್ಯನವರು ನಮ್ಮ ಹಿರಿಯ ಸಾವಯವ ಕೃಷಿಕರಲ್ಲೊಬ್ಬರು ಎಂಬುದು ಈ ಕಾಣಿಕೆಯ ಪುರಾವೆ ಕೂಡಾ.

ತಮ್ಮಯ್ಯನವರು ಆರೋಗ್ಯ ಸೂತ್ರವನ್ನು ಬಹು ಸರಳವಾಗಿ ಹೇಳುತ್ತಾರೆ. ಮನನಂಬುವಂತೆ ಹೇಳುತ್ತಾರೆ. ಎಲ್ಲೂ ಇದಮಿತ್ಥಂ ಎಂಬ ಮೇಲರಿಮೆ ಅವರ ಮಾತುಗಳಲ್ಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಈ ಆರೋಗ್ಯ ಸೂತ್ರವೂ ಜೀವಪರ ಮನಸ್ಸನ್ನು ಬೆಳೆಸುವುದೂ ಬೇರೆ ಬೇರೆ ಅಲ್ಲ. ಅವರು ಪುಸ್ತಕದ ಕಂಡಿಕೆ 1.2ರಲ್ಲಿ ಪ್ರಸ್ತುತಪಡಿಸುವ ಆರು ಸೂಚಿಗಳನ್ನು ಗಮನಿಸಿ. ಅವು ಏಕಕಾಲಕ್ಕೆ ಪ್ರಾಕ್ಟಿಕಲ್ ಆದ ಸೂಚನೆಗಳೊಂದಿಗೆ ಮನಸ್ಸಿನ ಧೋರಣೆಗಳ ಬಗ್ಗೆಯೂ ಹೇಳುತ್ತವೆ. ತಮ್ಮಯ್ಯನವರು ಸ್ಥೂಲವಾಗಿ ಪ್ರಕೃತಿ ಚಿಕಿತ್ಸೆಯನ್ನು ಪ್ರತಿಪಾದಿಸುತ್ತಾರೆ. ಮಹಾತ್ಮ ಗಾಂಧೀಜಿಯವರು ನಂಬಿದ್ದ ಈ ಆರೋಗ್ಯ ಸೂತ್ರ ತಮ್ಮಯ್ಯನವರ ದಿಕ್ಸೂಚಿ.

ಈ ಕೃತಿಯುದ್ದಕ್ಕೂ ತಮ್ಮಯ್ಯನವರು ಆಯಾ ಸಂದರ್ಭಕ್ಕೆ, ಸೇವಿಸಬೇಕಾದ ಆಹಾರ, ಮಾಡಬೇಕಾದ ವ್ಯಾಯಾಮ, ತೋರಬೇಕಾದ ಸಂಯಮಗಳ ಬಗ್ಗೆ ವಿವರಿಸುತ್ತಾರೆ. ಈ ಸಲಹೆಗಳು ವೈವಿಧ್ಯಮಯ ರೂಪಕ, ಉಪಮೆಗಳ ಮೂಲಕ ಪುನರಾವರ್ತನೆಯಾಗುತ್ತಿರುತ್ತವೆ. ಇದು ಬಹುಮುಖ್ಯ ರಿವಿಶನ್ ಅಂತ ಮಕ್ಕಳಿಗೆ ಮಾಡಿಸಿದ ಹಾಗೆ ಮರುನೆನಪು ಮಾಡುವುದು ತುಂಬಾ ಮುಖ್ಯ ಉಪಾಯ. ಓದುಗನಿಗೆ ನೆನಪಿನಲ್ಲಿ ವಿವರಗಳು ಉಳಿಯುವಂತೆ ಮಾಡುವ ಬಗೆ ಇದು.

ತಮ್ಮಯ್ಯನವರು ಮುಖ್ಯ ಕಾಯಿಲೆಗಳನ್ನು ಎತ್ತಿಕೊಂಡು ಅವುಗಳಿಗೆ ಪ್ರಕೃತಿ ಚಿಕಿತ್ಸೆ ಮತ್ತು ಸಹಜಾಹಾರದ ಮೂಲಕ ಹೇಗೆ ಪರಿಹಾರ ಪಡೆಯಬಹುದು ಎಂದು ವಿವರಿಸುತ್ತಾರೆ. ಇವುಗಳನ್ನು ಕಾಯಿಲೆಯೆಂದು ಕರೆಯುವುದೂ ತಪ್ಪು!

ಇವು ಮೂಲತಃ ದೇಹದ ಸಹಜ ಸ್ಥಿತಿಯಲ್ಲುಂಟಾಗುವ ವ್ಯತ್ಯಾಸಗಳು, ಊನಗಳು. ಬಿಪಿ, ಸಕ್ಕರೆ ಕಾಯಿಲೆಯಂಥಾದ್ದು ವಂಶಪಾರಂಪರ್ಯವಾಗಿ ಬರಬಹುದು. ಆದರೆ, ಅದರ ನಿಯಂತ್ರಣದ ಪ್ರೌಢಿಮೆಯನ್ನು ಪ್ರತಿಯೊಬ್ಬನೂ ಬೆಳೆಸಿಕೊಳ್ಳಬೇಕು. ಈ ಬಗ್ಗೆ ತಮ್ಮಯ್ಯನವರಿಗಿರುವ ತಾತ್ವಿಕ ಸ್ಪಷ್ಟತೆ ಅದ್ಭುತ. ಅವರೆಲ್ಲೂ ಇದಮಿತ್ಥಂ ಎಂದು ವಾದಿಸುವುದಿಲ್ಲ. ವೈದ್ಯರಲ್ಲಿಗೆ ಹೋದಾಗ ಅವರು ನೀಡುವ ಮಾತ್ರೆ ಬಗ್ಗೆ ನಮಗೆ ಗಮನವೇ ಹೊರತು ಅವರು ನೀಡುವ ಸಲಹೆ ಬಗ್ಗೆ ಅಲ್ಲ ಎಂಬ ಮಾತುಗಳನ್ನು ತಮ್ಮಯ್ಯನವರು ಹೇಳುತ್ತಾರೆ.

ತನ್ನ ಆಹಾರ ತಾನೇ ಬೆಳೆದುಕೊಳ್ಳಬಹುದಾದ ರೈತರೂ ಈ ಆಹಾರದ ವಿಚಾರದಲ್ಲಿ ಹಾದಿ ತಪ್ಪಿರುವ ಬಗ್ಗೆ ತಮ್ಮಯ್ಯನವರಿಗೆ ವಿಷಾದವಿದೆ. ನಮ್ಮ ಗ್ರಾಮೀಣ ಪ್ರದೇಶದ ರೈತರ ಚಟಗಳನ್ನು ಗಮನಿಸಿದರೆ ಈ ಸ್ವಯಾರ್ಜಿತ ಆರೋಗ್ಯ ಸಮಸ್ಯೆ ಎಂಥಾ ಸಾಮುದಾಯಿಕ ಸಮಸ್ಯೆಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಗ್ರಾಮೀಣ ಪುರುಷರ ಕತೆ ಹೀಗಾದರೆ ಮಹಿಳೆಯರು ತಾವೇ ರಕ್ತಹೀನತೆಗೆ ಒಳಗಾಗಿರುವುದಲ್ಲದೇ ತಮ್ಮ ಮಕ್ಕಳಿಗೆ ಬನ್, ಬಿಸ್ಕೆಟು, ಐಸ್‌ಕ್ಯಾಂಡಿ, ಚಿಪ್ಸ್ ತಿನ್ನಿಸುವ ಕಕ್ಕುಲಾತಿ ನೋಡಿದರೆ ಬೇಸರವಾಗುತ್ತದೆ.

ತಮ್ಮಯ್ಯನವರ ಈ ಕೃತಿ ಬಹು ಮುಖ್ಯವಾಗುವುದು ಇದೇ ಕಾರಣಕ್ಕೆ. ಇಲ್ಲಿನ ಬಹುತೇಕ ಸಲಹೆಗಳು ಗ್ರಾಮೀಣ ಸಮುದಾಯಗಳಿಗೂ ಒಗ್ಗುವಂಥಾದ್ದು. ನಗರ ವಾಸಿಗಳಿಗೂ ಒಪ್ಪುವಂಥಾದ್ದು. ತಮ್ಮಯ್ಯನವರ ಈ ಕೃತಿ ಸಾವಿರಾರು ಮಂದಿಯ ಕೈ ಸೇರಲಿ. ಓದಿದವರು ತಮ್ಮ ಮತ್ತು ತಮ್ಮ ಕುಟುಂಬದ ಆರೋಗ್ಯ ರೀತಿಯನ್ನು ಬದಲಾಯಿಸಿ ಹೊಸ ಆರೋಗ್ಯದ ಭಾಗ್ಯ ಪಡೆಯಲಿ ಎಂದು ಹಾರೈಸುವೆ.

ಕೆ.ಪಿ.ಸುರೇಶ    

ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ತಜ್ಞ    

ಬೆನ್ನುಡಿ

ರೋಗರಹಿತ ಬಾಳ್ವೆಗೆ ದಿನಚರಿ

ಸೃಷ್ಟಿಯಲ್ಲಿನ ಎಲ್ಲಾ ಜೀವರಾಶಿಗಳಂತೆಯೇ ಜನಿಸುವ ಮಾನವ ಮೊಗ್ಗಾಗಿ, ಹೂವಾಗಿ ಅರಳಿ, ಕಾಯಿಯಾಗಿ, ಕಾಯಿ ಹಣ್ಣಾಗಿ, ಪೂರ್ಣಾಯುಷ್ಯ ಅನುಭವಿಸಿ ಸಾರ್ಥಕತೆಯಿಂದ ದೇಹ ತ್ಯಜಿಸುವುದು ಸೃಷ್ಟಿಯ ನಿಯಮ. ಆದರೆ, ಪ್ರಸ್ತುತ ಅನುಕರಣೆ-ಅನುಕೂಲಕ್ಕೆ ಬದಲಾದ ಆಹಾರ, ಸುಲಭ ಸೌಲಭ್ಯಗಳಿಂದ ತಗ್ಗಿದ ದೈಹಿಕ ಶ್ರಮ, ಗುರುತಿಲ್ಲದ ಗುರಿ ತಲುಪುವಲ್ಲಿನ ಮಾನಸಿಕ ಪ್ರಶಾಂತತೆ ನಷ್ಟಗಳಿಂದ ಮನುಷ್ಯನ ಸಾಮಾನ್ಯ ಸ್ಥಿತಿ ಆರೋಗ್ಯವಾಗಿರಲು ಏನೇನೆಲ್ಲಾ ಪ್ರಯತ್ನ ಮಾಡುತ್ತಿದ್ದರೂ ವಿಫಲವಾಗುತ್ತಿದ್ದಾನೆ. ನವೀನ ತಂತ್ರಜ್ಞಾನಗಳಿಂದ ಜೀವಿತಾವಧಿ ಹೆಚ್ಚಿದ್ದರೂ ಜೀವನದ ಗುಣಮಟ್ಟ ಕುಸಿದು, ಆರೋಗ್ಯ ಸುಧಾರಣೆಗಾಗಿ ಪರಿತಪಿಸುತ್ತ ಸಮಸ್ಯೆಗಳಿಗೆ ಹೊಂದಿಕೊಂಡು ಸಾಗುತ್ತಿರುವುದು ಕಾಣಬಹುದಾಗಿದೆ. ಈ ಪಡಿಪಾಟಲುಗಳಿಗೆ ಆಶಾಕಿರಣವೆಂಬಂತೆ “ಯೋಗ ಹಾಗೂ ಪ್ರಕೃತಿ ಚಿಕಿತ್ಸೆ” (Nature cure) ವಿಧಾನ ಪರಿಹಾರಾತ್ಮಕ ವೈದ್ಯ ವಿಜ್ಞಾನ ಪದ್ಧತಿಯಾಗಿದೆ. ಮಾನವನ ಶಕ್ತಿ-ಪೋಷಣೆಗಳ ಮೂಲ ಆಹಾರದ ಅರಿವು, ದೈಹಿಕ-ಅಂಗಾಗಗಳ ಹುರುಪಿಗೆ ಯೋಗ ಕ್ರಿಯೆಗಳು, ಮಾನಸಿಕ ಪ್ರಫುಲ್ಲತೆಗೆ ಪ್ರಾಣಾಯಾಮ-ಧ್ಯಾನಗಳ ವಿಸ್ತಾರ ವಿವರಣೆಗಳ ಮೂಲಕ ರೋಗರಹಿತ ಬಾಳ್ವೆಗೆ ದಿನಚರಿ, ಜೀವನ ಕ್ರಮ-ಅಭ್ಯಾಸಗಳು ಹಾಗೂ ಸುಲಭ ಚಿಕಿತ್ಸೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಮೇಲಾಗಿ ಔಷಧಿರಹಿತವಾಗಿ ಪಂಚಮಹಾಭೂತಗಳೇ ಚಿಕಿತ್ಸಾ ಮಾಧ್ಯಮಗಳಾಗಿರುವುದು ಪ್ರಕೃತಿ ಚಿಕಿತ್ಸೆಯ ವಿಶೇಷತೆ. ಪೂರಕವಾಗಿ ಹಿರಿಯ ಸಹಜ ಕೃಷಿಕ, ಯೋಗ ಗುರುಗಳಾದ ಶ್ರೀ ಪಿ.ಪಿ.ತಮ್ಮಯ್ಯರವರ ʻನಮ್ಮ ಆರೋಗ್ಯ, ಆಹಾರ ಹಾಗೂ ಜವಾಬ್ದಾರಿʼ ಪುಸ್ತಕದಲ್ಲಿ ಪ್ರಕೃತಿ ವಿಧಾನಗಳ ಬಗ್ಗೆ ವಿವರವಾಗಿ ತಿಳಿಯಬಹುದಾಗಿದ್ದು, ಪ್ರತಿಯೊಬ್ಬ ಆರೋಗ್ಯಾಸಕ್ತರು ಓದಲೇಬೇಕಾದ ಪುಸ್ತಕ ಇದಾಗಿದೆ

ಕೆ.ಎಸ್. ಗಿರಿರಾಜು 

ಪ್ರಕೃತಿ ಚಿಕಿತ್ಸಾ ಕಾರ್ಯಕರ್ತರು, ಬೆಂಗಳೂರು 

ಖರೀದಿಸಲು ಹೀಗೆ ಮಾಡಿ

ಪುಸ್ತಕದ ಬೆಲೆ ರೂ. 300/- (ಕೊರಿಯರ್‌ ವೆಚ್ಚ ಸೇರಿ) ಇದ್ದು, ಖರೀದಿಸಿದ ಪುಸ್ತಕಗಳ ಸಂಖ್ಯೆಗನುಗುಣವಾಗಿ ಒಟ್ಟು ಮೊತ್ತವನ್ನು ಈ ಕೆಳಕಂಡ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಕಳುಹಿಸಿದರೆ ತಮ್ಮ ವಿಳಾಸಕ್ಕೆ ಪುಸ್ತಕಗಳನ್ನು ಕಳುಹಿಸಲಾಗುವುದು. ಮೊತ್ತ ಪಾವತಿಸಿದ ವಿವರ ಮತ್ತು ತಮ್ಮ ಪಿನ್ ಕೋಡ್ ಸಹಿತ ವಿಳಾಸವನ್ನು ಈ ಕೆಳಕಂಡ ವಾಟ್ಸ್ಆ್ಯಪ್ ನಂಬರ್‌ಗೆ ಕಳುಹಿಸುವುದು.

DEEDI SERVICES

9483130778