ಸಹಜ ಆಹಾರ

ನಾವು ಸೇವಿಸುವ ಆಹಾರದಲ್ಲಿ 3 ತರಹದ ಆಹಾರಗಳಿವೆ. ಅವುಗಳೆಂದರೆ, ಅಮೃತ ಆಹಾರ, ಮೃತ ಆಹಾರ ಹಾಗೂ ಪ್ರೇತ ಆಹಾರ. ಇವುಗಳನ್ನೇ ಭಗವದ್ಗೀತೆಯಲ್ಲಿ ಕ್ರಮವಾಗಿ ಸಾತ್ವಿಕ ಆಹಾರ, ರಾಜಸಿಕ ಆಹಾರ ಹಾಗೂ ತಾಮಸಿಕ ಆಹಾರ ಎಂದು ಹೇಳಲಾಗಿದೆ.

ಪ್ರಕೃತಿಯಲ್ಲಿ ಸಹಜವಾಗಿ ಸೇವನೆಗೆ ಸಿದ್ಧವಾಗಿ ಬಂದಂತಹ ಆಹಾರವೇ ಅಮೃತ ಆಹಾರ. ಎಲ್ಲ ರೀತಿಯ ಹಣ್ಣುಗಳು, ಬೀಜಗಳು, ಕಾಳುಗಳು, ತರಕಾರಿಗಳು ಇವೆಲ್ಲವನ್ನು ನೇರವಾಗಿ ಬಳಸಿದಾಗ ಅದೇ ‘ಅಮೃತ ಆಹಾರ’ವೆನಿಸುತ್ತದೆ. ಇದೇ ಆಹಾರವನ್ನು ಬಾಯಿರುಚಿಗೆ ತಕ್ಕಂತೆ ಬೇಯಿಸಿ, ಮಸಾಲೆ ಹಾಕಿ, ಒಗ್ಗರಣೆ ಕೊಟ್ಟು ಬಗೆ ಬಗೆಯ ರುಚಿಗಳನ್ನು ಸೇರಿಸಿ ತಿನ್ನುವುದು ‘ಮೃತ ಆಹಾರ’. ಆಮೇಲೆ ಇದೇ ಬೇಯಿಸಿದ ಆಹಾರವನ್ನೇ ಬೇಗ ತಿನ್ನದೆ ಹಲವು ಗಂಟೆಗಳು, ದಿನಗಳು ಕಳೆದು ನಂತರ ತಿಂದಾಗ ಅದನ್ನು ‘ಪ್ರೇತ ಆಹಾರ’ ಎನ್ನುವರು.

‘ಅಮೃತ ಆಹಾರ’ ತಿಂದಾಗ ದೇಹದಲ್ಲಿ ಉತ್ಪನ್ನವಾಗುವ ಶಕ್ತಿಯ ಜೀವ ಕಣಗಳ ಉತ್ಪತ್ತಿ, ಕ್ರಿಯಾಶೀಲತೆ ಅತ್ಯುತ್ತಮವಾಗಿ ಆಯಸ್ಸು ಹೆಚ್ಚುತ್ತದೆ. ಜೊತೆಗೆ ದೈಹಿಕ ಆರೋಗ್ಯವೂ ಚೆನ್ನಾಗಿರುತ್ತದೆ.

ದೇಹವು ಹಗುರವಾಗಿದ್ದು, ಮಾನಸಿಕ ಪ್ರಶಾಂತತೆ ಲಭಿಸುತ್ತದೆ. ಅದೇ ಆಹಾರವನ್ನು ಬೇಯಿಸಿ ತಿಂದಾಗ (ರಾಜಸಿಕ ಆಹಾರ) ಜೀವಕಣಗಳ ಜೀವಿತಾವಧಿ ಸ್ವಲ್ಪ ಕಡಿಮೆಯಾಗುತ್ತದೆ. ಈ ಆಹಾರದ ಪ್ರಭಾವದಿಂದ ನಾವು ಕೋಪ, ಅಹಂಕಾರದಿಂದ ಕೂಡಿರುತ್ತೇವೆ. ಜೊತೆಗೆ ಹೆಚ್ಚು ಬೇಯಿಸಿದಾಗ ಆಹಾರದಲ್ಲಿನ ಪೋಷಕಾಂಶಗಳು ನಷ್ಟವಾಗುತ್ತವೆ.

ಆಹಾರವನ್ನು ಬೇಯಿಸಿ 4 ಗಂಟೆಗಳ ನಂತರ ತಂಗಳನ್ನು ಪ್ರಿಜ್‌ನಲ್ಲಿಟ್ಟು ತಿಂದಾಗ (ಪ್ರೇತ ಆಹಾರ ಅಥವಾ ಮೃತ ಆಹಾರ) ಅದರಲ್ಲಿ ಉತ್ಪನ್ನವಾಗುವ ಜೀವಾಣುಗಳು ಅಲ್ಪ ಅವಧಿಯಾಗಿರುತ್ತವೆ. ಆಗ ಮಂಕು, ಆಲಸ್ಯ, ಜಡತ್ವ, ಸೋಮಾರಿತನ, ನಕಾರಾತ್ಮಕ ಯೋಚನೆಗಳು, ಜುಗುಪ್ಪೆ, ನಿದ್ರೆಯೂ ಹೆಚ್ಚಾಗುತ್ತದೆ. ಇದನ್ನೇ ಭಗವದ್ಗೀತೆಯಲ್ಲಿ ‘ತಾಮಸಿಕ’ ಎನ್ನುವರು. ಈ ಆಹಾರವನ್ನು ನಾವು ಬಿಡಬೇಕಾಗಿದೆ. ಇಲ್ಲವಾದರೆ ಉಳಿಗಾಲವಿಲ್ಲ. ಅಂಗಡಿಯ ಪಾಕೆಟ್‌ಗಳಲ್ಲಿ ದೊರೆಯುವ ಆಹಾರಗಳೆಲ್ಲಾ ‘ಪ್ರೇತ ಆಹಾರ’ ಸಮೂಹಕ್ಕೆ ಬರುತ್ತವೆ.

ಯಾವಾಗಲೂ ವಿಷಮುಕ್ತವಾದ ಶುದ್ಧವಾದ ಆಹಾರವನ್ನು ಖುಷಿಯಿಂದ ಸೇವಿಸಬೇಕು. ತನ್ನ ಆಹಾರವನ್ನು, ತನ್ನ ಜಮೀನಿನಲ್ಲಿ, ತಾನೇ ವಿಷಮುಕ್ತವಾಗಿ ಬೆಳೆದುಕೊಳ್ಳಬೇಕು, ಆಗದವರು ನೈಸರ್ಗಿಕ ಕೃಷಿಕರನ್ನು ಗುರುತಿಸಿಕೊಂಡು ನೇರವಾಗಿ ಅವರಿಂದ ಆಹಾರ ಪದಾರ್ಥಗಳನ್ನು ಖರೀದಿಸಬೇಕು. ಇದು ನಮ್ಮ ವೈಯಕ್ತಿಕ ಜವಾಬ್ದಾರಿ ಕೂಡ.